ಶ್ರೀನಿವಾಸರಾವ್, ಕರ್ಪೂರ
	1863-1932. ಕನ್ನಡ ಸಾಹಿತ್ಯ ಪರಿಷತ್ತಿನ ಆದ್ಯ ಸಂಸ್ಥಾಪಕರಲ್ಲೊಬ್ಬರು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಭಿಮಾನಿಗಳಾಗಿದ್ದವರು. ಇವರ ಪೂರ್ವಿಕರು ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದಾಗ, ಬೆಟ್ಟದ ಅಡಿಯಿಂದ ಮುಡಿಯವರೆಗೂ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ಕರ್ಪೂರ ಎಂಬ ಹೆಸರು ಬಂದಿತಂತೆ. ಇವರದು ಶ್ರೀಮಂತ ಮನೆತನವಾಗಿದ್ದರೂ ತಂದೆಯ ಕಾಲಕ್ಕೆ ಮನೆಯಲ್ಲಿ ಬಡತನ ಇತ್ತು. ಕಷ್ಟದಲ್ಲಿಯೇ ಶ್ರೀನಿವಾಸರಾಯರ ವ್ಯಾಸಂಗ ನಡೆಯಿತು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ, ಬಿ.ಎಸ್‍ಸಿ. ಪದವಿ ಪಡೆದ ಇವರು ಅನಂತರ ಪುಣೆಯಲ್ಲಿ ವ್ಯಾಸಂಗಮಾಡಿ ಎಂಜಿನಿಯರ್ ಪದವಿ ಗಳಿಸಿಕೊಂಡರು. ಬೊಂಬಾಯಿ ಸರ್ಕಾರದ ಮರಾಮತ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಸುಮಾರು ಕಾಲು ಶತಮಾನಕಾಲ ಆ ಇಲಾಖೆಯಲ್ಲಿ ದುಡಿದು ಮುಖ್ಯ ಎಂಜಿನಿಯರ್ ಪದವಿಗೇರಿ ನಿವೃತ್ತರಾದರು. ಅನಂತರ ಆಗಿನ ಮೈಸೂರು ಸರ್ಕಾರದ ಎಂಜಿನಿಯರಿಂಗ್ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿಯೂ ಸೇವೆಸಲ್ಲಿಸಿದರು.

	ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲ್ಮೆಗಾಗಿ ಶ್ರಮಿಸಿದರು. ಪರಿಷತ್ತಿಗಾಗಿ ಒಂದು ಕಟ್ಟಡ ಆಗಬೇಕೆಂದು ಪ್ರಯತ್ನಿಸಿದುದಲ್ಲದೆ ತಾವೇ ಮೊದಲು ಕಾಣಿಕೆಯಾಗಿ ಐದುನೂರು ರೂಪಾಯಿಗಳನ್ನು ಕೊಟ್ಟರು. ಜೊತೆಗೆ ಸರ್ಕಾರದಿಂದ ಹಾಗೂ ಶ್ರೀಮಂತರಿಂದ ಸಹಾಯ ದೊರಕಿಸಿಕೊಂಡು ದುಡಿದರು. ಇದರ ಪರಿಣಾಮವಾಗಿ ಪರಿಷತ್ತಿನೊಡನೆ ಇವರ ಸಂಪರ್ಕ ಗಾಢವಾಯಿತು. ಪ್ರಾರಂಭದಲ್ಲಿ ಪರಿಷತ್ತಿನ ಸದಸ್ಯರಾಗಿ, ಪ್ರದಾತೃಗಳಾಗಿ ಮತ್ತು ಪರಿಷತ್ತಿನ ಉಪಾಧ್ಯಕ್ಷರಾಗಿ ಇವರು ಸೇವೆಸಲ್ಲಿಸಿದರು. ಈಗಿರುವ ಪರಿಷನ್ಮಂದಿರ ಕಟ್ಟಡದ ತಳಹದಿಯನ್ನು ಶ್ರೀನಿವಾಸರಾಯರೇ ಹಾಕಿದ್ದು.

	ಇವರು ಕನ್ನಡದ ಜೊತೆಗೆ ಸಂಸ್ಕøತ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಕನ್ನಡದಲ್ಲಿ ಇವರಿಗೆ ವಿಶೇಷ ಜ್ಞಾನ, ಅಭಿಮಾನ ಇತ್ತು. ಇವರು ಕನ್ನಡದಲ್ಲಿ ಬರೆದ ಕೆಲವು ವಿದ್ವತ್ಪೂರ್ಣ ಲೇಖನಗಳು ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅನಂತರ ಆ ಲೇಖನಗಳನ್ನೆಲ್ಲ ಸಂಕಲಿಸಿ ಸಾಹಿತ್ಯಶಾಸ್ತ್ರ ಎಂಬ ಪುಸ್ತಕವನ್ನು ಪ್ರಕಟಿಸಲಾಗಿದೆ.

	ಇವರು ಸಲ್ಲಿಸಿದ ಸಾಮಾಜಿಕ ಮತ್ತು ಸಾಹಿತ್ಯ ಸೇವೆಯನ್ನು ಮನ್ನಿಸಿ ಆಗಿನ ಮೈಸೂರು ಮಹಾರಾಜರು ರಾಜಸಭಾಭೂಷಣ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. ಹಾಸನದಲ್ಲಿ 1919ರಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರಾಗಿ ಮಾಡಿ ಗೌರವಿಸಲಾಯಿತು. ಇವರು 1932 ಜೂನ್ 2ರಂದು ನಿಧನ ಹೊಂದಿದರು.   	
	(ಎಚ್.ಪಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ